ಭೀಮಸೇನರಾವ್, ಡಿ ಕೆ
	1904-69. ಹಳೆಯ ಹೈದರಾಬಾದು ಕರ್ನಾಟಕದಲ್ಲಿ ಕನ್ನಡದ ಕೀರ್ತಿಯನ್ನು ಬೆಳಗಿದ ಹಿರಿಯ ಭಾಷಾಸೇವಕರು ಹಾಗೂ ವಿದ್ವಾಂಸರು. ಹುಟ್ಟಿದ್ದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ. ತಂದೆ ಕೇಶವರಾವ್, ತಾಯಿ ಲಕ್ಷ್ಮೀಬಾಯಿ. ಬಾಲ್ಯವನ್ನು ಬಡತನದಲ್ಲಿಯೇ ಕಳೆದರು. ಆರನೆಯ ವಯಸ್ಸಿನಲ್ಲಿ ದಿದ್ದಿಲಗೆಯ ಅಯ್ಯನವರ ಪಾಠಶಾಲೆಯಲ್ಲಿ ಆರಂಭದ ಶಿಕ್ಷಣ ಪಡೆದರು. ಆಗ ರಾಯಚೂರು ಜಿಲ್ಲೆ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದುದರಿಂದ ಇವರು ಕನ್ನಡಕ್ಕಿಂತ ಉರ್ದುವನ್ನೇ ಪ್ರಧಾನವಾಗಿ ಕಲಿಯಬೇಕಾಯಿತು. ಅನಂತರ ಇವರು ಸಿಂಧನೂರು ಮತ್ತು ಲಿಂಗಸೂಗೂರಿನಲ್ಲಿ ಓದಿ 1922ರಲ್ಲಿ ಉರ್ದು ಮಾಧ್ಯಮದಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅನಂತರ ತಮ್ಮ ವ್ಯಾಸಂಗವನ್ನು ಉಸ್ಮಾನಿಯ ವಿಶ್ವಾವಿದ್ಯಾಲಯದಲ್ಲಿ ಮುಂದುವರಿಸಿ 1922ರಲ್ಲಿ ಬಿ.ಎ. ಪದವಿ ಪಡೆದರು. ಆ ಪರೀಕ್ಷೆಯಲ್ಲಿ ಇವರಿಗೆ ಕನ್ನಡದಲ್ಲಿ ಪ್ರಥಮ ಸ್ಥಾನ ದೊರೆಯಿತು. ಇದರಿಂದ ಉತ್ತೇಜಿತರಾಗಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಆಶಿಸಿದರು. ಅದೇ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ (1927) ಪ್ರಥಮವಾಗಿ ಕನ್ನಡ ಎಂ.ಎ. ತರಗತಿ ಆರಂಭವಾಗಿತ್ತು. ಆ ತರಗತಿಗೆ ಇವರು ಪ್ರವೇಶ ಪಡೆದರು. ಆಗ ಇವರ ಸಹಪಾಠಿಗಳಾಗಿದ್ದವರು ಕುವೆಂಪು, ಡಿ. ಎಲ್. ನರಸಿಂಹಾಚಾರ್, ಕೆ. ವೆಂಕಟರಾಮಪ್ಪ, ಎನ್. ಅನಂತರಂಗಾಚಾರ್ ಮೊದಲಾದವರು. 1929ರಲ್ಲಿ ಇವರು ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧಕರಾಗಿಯೂ ಬೋಧಕರಾಗಿಯೂ ನೇಮಕಗೊಂಡರು. ಅನಂತರ 1933ರಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡ ಇವರು ಮುಂದೆ ಆ ಶಾಖೆಯ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು. ತಮ್ಮ ಅಧಿಕಾರಾವಧಿಯಲ್ಲಿ ಇವರು ಕನ್ನಡ ವಿಭಾಗವನ್ನು ಅಭಿವೃದ್ಧಿಪಡಿಸಿದರು. ಕನ್ನಡದಲ್ಲಿ ಎಂ.ಎ. ತರಗತಿಗಳನ್ನು ಆರಂಭಿಸಿದ್ದಲ್ಲದೆ ಸಂಶೋಧನೆಗೂ ಅವಕಾಶ ಕಲ್ಪಿಸಿದರು. ಹೈದರಾಬಾದಿನ ಆರೇಳು ಕಾಲೇಜುಗಳಲ್ಲಿ ಕನ್ನಡ ಅಧ್ಯಯನಕ್ಕಾಗಿ ವ್ಯವಸ್ಥೆಗೊಳಿಸಿದ್ದಲ್ಲದೆ ಗುಲ್ಬರ್ಗಾ, ಯಾದಗಿರಿ, ರಾಯಚೂರು ಪ್ರದೇಶಗಳಲ್ಲಿ ಕನ್ನಡ ವ್ಯಾಸಂಗಕ್ಕಾಗಿ ಏರ್ಪಾಡು ಮಾಡುವಲ್ಲಿ ಪ್ರೋತ್ಸಾಹವಿತ್ತರು.

	ಭೀಮಸೇನರಾಯರಿಗೆ ಕನ್ನಡದ ಜೊತೆಗೆ ಇಂಗ್ಲಿಷ್ ಉರ್ದು ಭಾಷೆಗಳಲ್ಲಿ ಪರಿಶ್ರಮವಿತ್ತು. ಇವರು ಪ್ರಕಟಿಸಿರುವ ಪುಸ್ತಕಗಳು ಬೆಲೆಯುಳ್ಳ ಕೃತಿಗಳಾಗಿವೆ. ಇವರ ಕರ್ನಾಟಕಾಂಧ್ರ ಮಹಾರಾಷ್ಟ್ರ ಸಾಹಿತ್ಯಾವಲೋಕನ ಎಂಬುದು ಸಮಶೋಧನಾ ಪ್ರಬಂಧ. ಈ ಪ್ರಬಂಧದಲ್ಲಿ ಇತಿಹಾಸ ವಿಭಾಗ, ಸಾಹಿತ್ಯವಿಭಾಗ ಎಂಬ ಎರಡು ವಿಭಾಗಗಳಿವೆ. ಈ ಎರಡೂ ಭಾಗಗಳಲ್ಲಿ ಮೂರೂ ಭಾಷೆಗಳ ಇತಿಹಾಸ, ಸಾಹಿತ್ಯ, ಸಂಸ್ಕøತಿಗಳ ಸ್ಥೂಲ ಪರಿಚಯವಿದೆ. ಶಬ್ದಮಣಿದರ್ಪಣದ ಪಾಠಾಂತರಗಳು ಎಂಬುದು ಇವರ ಇನ್ನೊಂದು ಪಾಂಡಿತ್ಯಪೂರ್ಣ ಕೃತಿ. ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ 1943ರಲ್ಲಿ ಇವರು ಮಾಡಿದ ಮೂರು ಉಪನ್ಯಾಸಗಳು ಅನುಭವಾಮೃತವೂ ಹರಿಕಥಾಮೃತಸಾರವೂ ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಗಿದೆ.

	ಹೂಮಾಲೆ, ಪಂಚತಂತ್ರ, ಶತಮೂರ್ಖರು, ಒಂದರಿಂದ ಏಳನೆಯ ತರಗತಿಗಳವರೆಗೆ ಪಠ್ಯಪುಸ್ತಕಗಳು(ಇವು ಇವರು ಪ್ರಕಟಿಸಿರುವ ಇತರ ಗ್ರಂಥಗಳು, ಇವರ ಸುಮಾರು 50 ಸಂಶೋಧನಾತ್ಮಕ ಲೇಖನಗಳು ಕನ್ನಡ, ತೆಲುಗು, ಉರ್ದು, ಇಂಗ್ಲಿಷ್ ಭಾಷೆಗಳಲ್ಲಿವೆ. ಇವುಗಳಲ್ಲಿ 19 ಲೇಖನಗಳಿಂದ ಕೂಡಿದ ಸಾಹಿತ್ಯಾವಲೋಕನವೆಂಬ ಕೃತಿ ಇವರ ಮರಣೋತ್ತರ ಪ್ರಕಟವಾಯಿತು. ಇವರ ಸಂಶೋಧನಾ ಲೇಖನಗಳಲ್ಲಿ ಪಾಂಡಿತ್ಯಪೂರ್ಣವಾದ ಚರ್ಚೆ ಮತ್ತು ವಿಮರ್ಶನಾ ಬುದ್ಧಿಯ ತಿಕ್ಷ್ಣತೆ ಗುರುತಿಸಬಹುದು.

	ಭೀಮಸೇನರಾಯರು ಕನ್ನಡ ಸಂಘಶಕ್ತಿಯನ್ನು ಬಹುವಾಗಿ ಬೆಳೆಸಿದರು. ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾಗಿ ಏಳು ವರ್ಷ ಸೇವೆ ಸಲ್ಲಿಸಿ ಅದಕ್ಕೊಂದು ಸ್ವಂತ ಕಟ್ಟಡವಾಗುವ ಹಾಗೆ ಮಾಡಿದರು. ಸಂಘದ ಆಶ್ರಯದಲ್ಲಿ ಪ್ರಕಟನಾ ವಿಭಾಗ ಆರಂಭಿಸಿ ಒಳ್ಳೆಯ ಗ್ರಂಥಗಳನ್ನು ಪ್ರಕಟಿಸಿದರು. ಪ್ರತಿ ವರ್ಷವೂ ನಾಡಹಬ್ಬ ಆಚರಿಸಲು ಏರ್ಪಾಡು ಮಾಡಿದರು. ನೃಪತುಂಗ ಶಾಲೆ, ಶಾರದಾ ಕನ್ಯಾಶಾಲೆ ಇವೆರಡೂ ಒಂದೆ ಆಡಳಿತ ಸಂಸ್ಥೆಗೆ ಒಳಪಡುವಂತೆ ಮಾಡಿ ಅದರ ಮೊದಲನೆಯ ಅಧ್ಯಕ್ಷರಾಗಿ ಆಯ್ಕೆಗೊಂಡರು. ಕನ್ನಡ ನಿಘಂಟಿನ ಸಂಪಾದಕ ಮಂಡಳಿಯಲ್ಲಿ 1944ರಿಂದ ತಮ್ಮ ಕೊನೆಗಾಲದ ತನಕವೂ ಸೇವೆ ಸಲ್ಲಿಸಿದರು. ಕನ್ನಡ ವಿಶ್ವಕೋಶದ ಪ್ರಥಮ ಸಂಪಾದಕ ಮಂಡಳಿಯಲ್ಲಿ ಇವರು ಸದಸ್ಯರಾಗಿದ್ದರು. ಹೀಗೆ ಕನ್ನಡ ನಾಡುನುಡಿಗೆ ಸಂಸ್ಕøತಿಗೆ ಸೇವೆ ಸಲ್ಲಿಸಿದ ಭೀಮಸೇನರಾಯರನ್ನು 1969ರಲ್ಲಿ ಆಗಿನ ಮೈಸೂರು ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು. ದಿನಾಂಕ 29-11-69ರಂದು ತೀರಿಕೊಂಡರು. 										
(ಕೆ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ